ಕಾಡುಕಟುಕರೋಹಿಣಿ

ರ್ಯಾನನ್‍ಕ್ಯುಲೇಸೀ ಕುಟುಂಬಕ್ಕೆ ಸೇರಿದ ಹೆಲೆಬೋರಸ್ ನೈಜರ್ ಎಂಬ ಶಾಸ್ತ್ರೀಯ ಹೆಸರಿನ ಮೂಲಿಕೆ ಸಸ್ಯ. ಕಟುಕರೋಹಿಣಿ, ಕರೀಜೀರಿಗೆ ಮುಂತಾದ ಹೆಸರುಗಳೂ ಇದಕ್ಕಿವೆ. ಭಾರತದ ಗುಡ್ಡಗಾಡು ಪ್ರದೇಶದಲ್ಲಿ ಬೆಳೆಯುತ್ತದೆ. ಇದರ ಒಣಗಿದ ಬೇರು ಮತ್ತು ಬೇರಿನ ಕಷಾಯವನ್ನು ಔಷಧಿಯಲ್ಲಿ ಬಳಸಲಾಗುತ್ತದೆ. ಇದರ ಬೇರಿನಲ್ಲಿ ನೀರಿನಲ್ಲಿ ಕರಗುವ ಹೆಲಿಬೋರಿಯಿನ್ ಎಂಬ ವಸ್ತುವೂ ನೀರಿನಲ್ಲಿ ಕರಗದ ಹೆಲಿಬೋರಿಯಿನ್ ಎಂಬ ವಸ್ತುವೂ ಇವೆ. ಇವನ್ನು ಕರುಳುಹುಳು ರೋಧಕವಾಗಿ ಮೂರ್ಛೆಯ ರೋಗದಲ್ಲಿ, ಉನ್ಮಾದ ಸ್ಥಿತಿಯಲ್ಲಿ, ಜಲೋದರವಾದಾಗ, ಅಪಚನ ಮತ್ತು ಮಲಬದ್ಧತೆಯುಂಟಾದಾಗ ಉಪಯೋಗಿಸುತ್ತಾರೆ. ಅಲ್ಪ ಪ್ರಮಾಣದಲ್ಲಿ ಉಪಯೋಗಿಸಿದಾಗ ಹೃದಯದ ಬಡಿತವನ್ನು ಕಡಿಮೆ ಮಾಡುವ ಗುಣ ಇದಕ್ಕಿದೆ. ಕಣ್ಣಿನಲ್ಲಿ ಬೇರಿನ ರಸವನ್ನು ಹಿಂಡಿದಾಗ ಆ ಪ್ರದೇಶದ ಅರಿವಳಿಕೆಯನ್ನುಂಟುಮಾಡಬಲ್ಲದು.

 

(ಪಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ